Saturday, January 13, 2018

ಹರಪನ ಹಳ್ಳಿ ಭೀಮವ್ವ ( 1823-1902)

ಹರಪನ ಹಳ್ಳಿ  ಭೀಮವ್ವ 
ಕರ್ನಾಟಕ ಹರಿದಾಸ ಸಾಹಿತ್ಯಕ್ಕೆ ಮಹಿಳೆಯರ ಕೊಡುಗೆ ನಗಣ್ಯವೇನಲ್ಲ. ಪುರಂದರ ದಾಸರ ಪತ್ನಿ ಲಕ್ಷ್ಮೀಬಾಯಿ ಅವರು “ಶ್ರೀಪುರಂದರವಿಟ್ಠಲ” ಅಂಕಿತದಲ್ಲಿ ಹಲವಾರು ಕೃತಿಗಳನ್ನು ರಚನೆ ಮಾಡಿದ್ದು, ಅವುಗಳನ್ನು ಪುರಂದರ ದಾಸರದ್ದು ಎಂದೇ ಪರಿಗಣಿಸಲಾಗಿದೆ. ಆ ನಂತರ ಬಂದವರಲ್ಲಿ ಹೆಳವನಕಟ್ಟೆ ಗಿರಿಯಮ್ಮ, ಹರಪನಹಳ್ಳಿ ಭೀಮವ್ವ ಪ್ರಮುಖರು. ಉಳಿದ ಅನೇಕ ಅನಾಮಿಕ ಹರಿದಾಸ ಮಹಿಳೆಯರೂ ಇರಬಹುದು, ಅವರ  ಕೃತಿಗಳು ಪ್ರಚಾರವಾಗದೆ ಕಳೆದುಹೋಗಿರುವ ಸಾಧ್ಯತೆಗಳೇ ಹೆಚ್ಚು.
ಹರಪನಹಳ್ಳಿ ಭೀಮವ್ವನವರು ಈಗಿನ ದಾವಣಗೆರೆ ಜಿಲ್ಲೆಯ ನಾರಾಯಣ ಕೆರೆಯಲ್ಲಿ ( ಈಗ ಮುಳುಗಡೆಯಾಗಿದೆ) 1823ರಲ್ಲಿ ರಘುನಾಥಾಚಾರ್ಯ ಮತ್ತು ರಂಗಮ್ಮ ದಂಪತಿಗಳ ಮಗಳಾಗಿ  ಆಚಾರಸಂಪನ್ನರಾದ ವೈದಿಕ ಕುಟುಂಬದಲ್ಲಿ ಜನ್ಮ ತಾಳಿದರು. ಅವರು ಶ್ರೀ ರಾಯರ ಮಠದ ಅನುಯಾಯಿಗಳಾಗಿದ್ದವರು. ಬಾಲ್ಯದಿಂದಲೂ ಆಕೆ ವಿಲಕ್ಷಣ ಶಿಶುವಾಗಿ ಬೆಳೆದಳು. ಈ ಸಾಧ್ವಿಯ ಬಗ್ಗೆ ಅನೇಕ ಪವಾಡ ಸದೃಶ ಕತೆಗಳಿವೆ. ಮಗುವಿನ ಕೊರಳಿಗೆ ಹಾವು ಸುತ್ತಿಕೊಂಡಿದ್ದು, ಚೇಳು ಕಚ್ಚಲು ವಿಫಲವಾದದ್ದು ಹೀಗೆ. ಸದಾ  ಪರಮಾತ್ಮನ ಧ್ಯಾನಲ್ಲಿರುತ್ತಿದ್ದ ಭೀಮವ್ವನಿಗೆ ಆಗಿನ ಕಾಲದ ಸಂಪ್ರದಾಯದಂತೆ ಬಾಲ್ಯದಲ್ಲಿಯೇ ಮದುವೆಯೂ ಆಯಿತು. ಹನ್ನೊಂದು ವರ್ಷದ ಹುಡುಗಿಗೆ 45 ದಾಟಿದ ಮುನಿಯಪ್ಪ ಎಂಬಾತನೊಡನೆ ವಿವಾಹ ಜರುಗಿತು. ಭೀಮವ್ವ ಈಗ ಕೃಷ್ಣಾಬಾಯಿಯಾದಳು. ಕೆಲವು ವರ್ಷಗಳಲ್ಲಿ ಒಂದು ಗಂಡು, ಒಂದು ಹೆಣ್ಣು ಮಗುವಿನ ತಾಯಿಯೂ ಆದಳು. ಆಕೆಯ ಪತಿ ಮೃತನಾದಾಗ ಆಕೆಗೆ 36 ವರ್ಷವಾಗಿತ್ತು.
ಸಂಪ್ರದಾಯಸ್ಥ ಕುಟುಂಬದ ಆಕೆ ಈಗ ಮಡಿ ಹೆಂಗಸಾದಳು. ಮಕ್ಕಳ ಪೋಷಣೆ, ಮನೆಗೆಲಸದಲ್ಲಿ ಮಗ್ನಳಾದಳು. ಬಾಲ್ಯದಿಂದಲೂ ದೈವ ಭಕ್ತಳಾದ ಭೀಮವ್ವ ತಾನು ಕೇಳಿದ ಪೌರಾಣಿಕ ಪ್ರಸಂಗಗಳನ್ನಾಧರಿಸಿ, ಹಾಡುಗಳನ್ನೂ ಬರೆದಳು. ಆಕೆಯ ಸುಮಾರು 200 ಹಾಡುಗಳು ಮಾತ್ರ ದೊರೆತಿದ್ದು, ಉಳಿದವು ಕಳೆದುಹೋಗಿವೆ. ಇದರಲ್ಲಿ ಉಗಾಭೋಗ, ದ್ವಿಪದಿ, ಆರತಿ ಹಾಡು, ಮದುವೆಮನೆ ಹಾಡು, ಬೀಗರ ಹಾಡುಗಳೂ ಸೇರಿವೆ.
ತನ್ನ ಅಂಕಿತವಾಗಿ ಭೀಮೇಶ ಕೃಷ್ಣ ಎಂದು ಆ ಹಾಡುಗಳನ್ನು ಕೃಷ್ಣನಿಗೆ ಅರ್ಪಿಸಿದಳು. ಆಕೆ ರಚಿಸಿದ 145 ಹಾಡುಗಳು ದೊರೆತಿದ್ದು, ಪ್ರಕಟವೂ ಆಗಿವೆ. 1902ರಲ್ಲಿ ತುಂಗಭದ್ರೆಯ ತೀರದ ಹೊಸೂರು ಎಂಬಲ್ಲಿ ಆಕೆ ದೇಹತ್ಯಾಗ ಮಾಡಿದಳು ಎಂದು ತಿಳಿದುಬರುತ್ತದೆ.



SRI VENUGOPALA KRISHNA, MULABAGILU.