Friday, December 22, 2017

Sri Narahari Tirtha

ಶ್ರೀ   ನರಹರಿ ತೀರ್ಥರು (1324-33)
ಶ್ರೀಮಧ್ವಾಚಾರ್ಯರ ಮೊದಲ ಸಾಲಿನ ಶಿಷ್ಯರಲ್ಲಿ ಶ್ರೀ ನರಹರಿ (ನರಸಿಂಹ) ತೀರ್ಥರು ಪ್ರಮುಖರು. ಅವರ ಬಗ್ಗೆ ಆಚಾರ್ಯರ ಜೀವನ ಗಾಥೆಯಾದ ಶ್ರೀಮಧ್ವ ವಿಜಯದಲ್ಲಿ ನೇರವಾಗಿ ಯಾವ ಪ್ರಸ್ತಾಪವೂ ಕಾಣುವುದುದಿಲ್ಲ. ಆದರೆ ಉಡುಪಿಯ ಆಷ್ಟ ಮಠಾಧೀಶರ ಬಗ್ಗೆ ಪಟ್ಟಿ ಮಾಡುವಾಗ ನಾರಾಯಣ ಪಂಡಿತಾಚಾರ್ಯರು, ನರಸಿಂಹಪದಾಧಾರಾಃ.... ಎಂದು ಉಲ್ಲೇಖಿಸುತ್ತಾರೆ. ಈಗಿನ ಅಡಮಾರು ಮಠಕ್ಕೆ ಮೂಲ ಪುರುಷರು ನರಸಿಂಹ ತೀರ್ಥರೂ, ಇವರೇ ಪ್ರಸಿದ್ಧರಾದ ನರಹರಿ  ತೀರ್ಥರೂ ಆಗಿದ್ದರು.
ಶ್ರೀ ನರಹರಿ ತೀರ್ಥರು ಓಡಿಸ್ಸಾ  ಪ್ರದೇಶದಿಂದ ಬಂದವರು. ರಾಜಕಾರಣ, ಪಾಂಡಿತ್ಯ ಆಡಳಿತ ಸಾಮರ್ಥ್ಯ ಎಲ್ಲವನ್ನೂ ಹೊಂದಿದ್ದ ಅಪರೂಪದ ವ್ಯಕ್ತಿತ್ವ ಅವರದಾಗಿತ್ತು.
ಉಡುಪಿಯ ಆಷ್ಟ ಮಠಗಳ ಮೂಲ ಯತಿಗಳನ್ನು ಸ್ಮರಿಸುವ ಶ್ಲೋಕ ಹೇಗಿದೆ:
ವಂದೇ ಹೃಷೀಕೇಶಮಥೋ ನೃಸಿಂಹಮ್
ಜನಾರ್ದನಂ ಚಿಂತಯ ಧೀರುಪೇಂದ್ರಮ್ |
ಶ್ರೀವಾಮನಂ ಸಂಸ್ಮರ ವಿಷ್ಣುಮೇಮಿ
ಶ್ರೀರಾಮಮಂಚೇ&ಹಮಧೋಕ್ಷಜಮ್ ಚ ||
ಈ ಶ್ಲೋಕದಲ್ಲಿ ಎಂಟು ಮತಗಳ ಮೂಲ ಯತಿಗಳನ್ನೂ ಸ್ಮರಿಸಲಾಗಿದೆ. ಹಾಗೆ ನೋಡಿದರೆ, ಹೃಷೀಕೇಶ ತೀರ್ಥರ ನಂತರ ಉಡುಪಿ ಪರಂಪರೆಯಲ್ಲಿ ಬಂದ ಎರಡನೆಯ ಯತಿ ನರಹರಿ ತೀರ್ಥರೂ. ಇವರನ್ನು ಯಕ್ಷಗಾನ ಕಲೆಯ ಪ್ರವರ್ತಕರು ಎಂದೂ ವಿದ್ವಾಂಸರು ಅಭಿಪ್ರಾಯಪಡುತ್ತಾರೆ. ಈಗಲೂ ಯಕ್ಷಗಾನ ಕಲಾವಿದರು ತಮ್ಮ ಹಣೆಯಲ್ಲಿ ಧರಿಸುವ ತಿಲಕ ಮಾಧ್ವರ ಅಂಗಾರ-ಅಕ್ಷತೆಯನ್ನು ಅನುಕರಿಸುತ್ತದೆ ಎನ್ನುವುದು ಗಮನಾರ್ಹವಾಗಿದೆ.
ನರಸಿಂಹಪಾದಾಧಾರಾಃ ಎನ್ನುವ ಶಬ್ದಕ್ಕೆ ಸ್ವಯಂ ನಾರಾಯಣ ಪಂಡಿತರೇ ಭಾವಪ್ರಕಾಶಿಕೆಯಲ್ಲಿ ನರಹರಿ ತೀರ್ಥಾಃ ಎಂದು ವಿವರಿಸುತ್ತಾರೆ. ಹೀಗಾಗಿ ನರಸಿಂಹ ತೀರ್ಥರೆ ನರಹರಿ ತೀರ್ಥರು ಎಂದು ಸ್ಪಷ್ಟವಾಯಿತು. ಹಾಗಾದರೆ, ಅವರು ಉಡುಪಿಯ ಇತರೆ ಯತಿಗಳಂತೆ ಬಾಲ ಸನ್ಯಾಸಿಗಳೇ ಗೃಹಸ್ಥರೇ ಎಂಬ ಪ್ರಶ್ನೆ ಬರುತ್ತದೆ. ಈ ಮೇಲಿನ ಶ್ಲೋಕದಂತೆ ಮೊದಲು ಅವರು ಉಡುಪಿಯ ಅದಮಾರು ಮಠದ ಮೂಲ ಪುರುಷರಾಗಿದ್ದು, ಶ್ರೀಮದಾಚಾರ್ಯರ ಆದೇಶದಂತೆ ಕಲಿಂಗ ದೇಶಕ್ಕೆ ತೆರಳಿ ತಮ್ಮ ತಂದೆಯಂತೆ ತಾವೂ  ( ಪಿತ್ರಾಚಾರಮುಪೈತಿ ಸೂನುರಿತಿ ಸನ್ನೀತಿಸ್ಥಿತೋ ಧರ್ಮತಃ) ಅಲ್ಲಿನ ರಾಜರಿಗೆ ಸಲಹೆಗಾರರಾಗಿದ್ದಿರಬಹುದು. ಈ ಬಗ್ಗೆ ಶ್ರೀಕೂರ್ಮಮ್ ಶಿಲಾ ಶಾಸನದಲ್ಲಿ 1285ರಲ್ಲಿ ಪ್ರಸ್ತಾಪವಿದೆ.
ಕಲಿಂಗ ರಾಜ್ಯದ ದೊರೆ ಮೊದಲ ನರಸಿಂಹ 1264ರಲ್ಲಿ  ಮೃತನಾದಾಗ, ಅಲ್ಲಿನ ರಾಣಿ ಗರ್ಭಿಣಿಯಾಗಿದ್ದು, ಆಕೆ ಶಿಶುವನ್ನು ಪ್ರಸವಿಸುವವರೆಗೆ ಆ ರಾಜ್ಯದ ಆಡಳಿತದ ಹೊಣೆಯನ್ನು ನರಹರಿ ತೀರ್ಥರು  ಹೊತ್ತು, ಆಚಾರ್ಯರ ಆದೇಶದಂತೆ ಅಲ್ಲಿಗೆ ತೆರಳುವ ಮೊದಲು ಕಮಲೇಕ್ಷಣ ತೀರ್ಥರನ್ನು ಅದಮಾರು ಮಠದ ಪೀಠಾಧಿಪತಿಯನ್ನಾಗಿ ನೇಮಿಸಿದರು. 1279ನೇ ಇಸವಿಯ ಮುನ್ನವೇ ಅವರು ಸನ್ಯಾಸ ಸ್ವೀಕರಿಸಿದ್ದರು. ಆ ನಂತರ ರಾಜ್ಯದ ರಕ್ಷಣೆಗಾಗಿ ಅಲ್ಲಿಗೆ ತೆರಳಿ, ತಮ್ಮ ಕರ್ತವ್ಯವನ್ನು ನಿರ್ವಹಿಸಿ, ಅಲ್ಲಿನ ಯುವರಾಜ ಪ್ರಾಪ್ತ ವಯಸ್ಕನಾದ ನಂತರ ಉದುಪಿಗೆ ಹಿಂದಿರುಗಿದರು. ಅಲ್ಲಿಂದ ಮರಳಿ ಬರುವಾಗ ಆ ಗಜಪತಿ ರಾಜನ ಕೋಶದಲ್ಲಿದ್ದ ಪುರಾತನ ಬ್ರಹ್ಮ ಕರಾರ್ಚಿತ ಎಂದು ಪ್ರಸಿದ್ಧವಾದ ಮೂಲರಾಮ, ಸೀತಾದೇವಿಯರ ಪ್ರತಿಮೆಗಳನ್ನು ತಂದು ಕ್ರಿ.ಶ. 1293ರಲ್ಲಿ  ಶ್ರೀಮದಾಚಾರ್ಯರಿಗೆ ಒಪ್ಪಿಸಿದರು.
ಆಚಾರ್ಯ ಮಧ್ವರು ಈ ಪ್ರತಿಮೆಗಳನ್ನು ಹಲವು ದಿನಗಳು ಪೂಜಿಸಿ, ಬದರಿಗೆ ತೆರಳುವ ಮೊದಲು ಶ್ರೀ ಪದ್ಮನಾಭ ತೀರ್ಥರ ವಶಕ್ಕೆ ಒಪ್ಪಿಸಿದರು. ಇದು ಪರಂಪರಾನುಗತವಾಗಿ ಘಟ್ಟದ ಮೇಲಿನ ಮಠಗಳಲ್ಲಿ ಮೂಲ ಪ್ರತಿಮೆಯಾಗಿತ್ತು. ಈ ಬಗ್ಗೆ ಇದ್ದ, ಇರುವ ವಿವಾದ ಇಲ್ಲಿ ಅನಗತ್ಯ.
ನರಹರಿ ತೀರ್ಥರು ಸ್ವಯಂ ಸಂಗೀತಾಸಕ್ತರೂ ಆಗಿದ್ದರು. ಒಂದೆರಡು ದೇವರ ನಾಮಗಳೂ ಅವರ ಹೆಸರಿನಲ್ಲಿ ದಾಖಲಾಗಿದೆ.
ಶ್ರೀ ನರಹರಿ ತೀರ್ಥರು ಶ್ರೀಮಧ್ವರ ಹಲವು ಗ್ರಂಥಗಳಿಗೆ ಟೀಕೆ ಬರೆದಿದ್ದಾರೆ. ಅವರು ಬರೆದ ಯಮಕಭಾರತ ಟೀಕೆ ಶ್ರೀಕೃಷ್ಣಪ್ರಕಾಶಿಕಾ  ತುಂಬಾ ಸುಂದರವಾಗಿದೆ. ನರಹರಿ ತೀರ್ಥರ ರಚಿತ ಇತರೆ ಟೀಕಾ ಗ್ರಂಥಗಳು:
1.      ಗೀತಾಭಾಷ್ಯ ಭಾವಪ್ರಕಾಶಿಕಾ
2.     ವಿಷ್ಣುತತ್ತ್ವವಿನಿರ್ಣಯ ಟೀಕಾ
3.     ಕರ್ಮನಿರ್ಣಯ ಟೀಕಾ
4.    ಬ್ರಹ್ಮಸೂತ್ರ ಭಾಷ್ಯ ಭಾವಪ್ರಕಾಶಿಕಾ
5.     ಶ್ರೀಕೃಷ್ಣಪ್ರಕಾಶಿಕಾ
ಇವುಗಳಲ್ಲಿ ಯಮಕಭಾರತ ಟೀಕಾ ( ಶ್ರೀಕೃಷ್ಣ ಪ್ರಕಾಶಿಕಾ)  ಮಾತ್ರ ಮುದ್ರಿತವಾಗಿದ್ದು, ಉಳಿದವು ಶ್ರೀ ಜಯತೀರ್ಥರೇ ಮೊದಲಾದ ಟೀಕಾಕಾರರಿಂದ ಉಲ್ಲೇಖಿತವಾಗಿದೆ.
ನರಹರಿ ತೀರ್ಥರ ಶ್ರೀಕೂರ್ಮದ ಶಾಸನ ದೊರೆಯುವವರೆಗೆ ಅವರ ಬಗ್ಗೆ ಅನೇಕ ವಿಷಯಗಳು ಪ್ರಕಟವಾಗಿಯೇ ಇರಲಿಲ್ಲ. ಅವರಿಗೆ ಸನ್ಯಾಸ ದೀಕ್ಷೆ ದೊರೆತಾಗ ಅವರ ವಯಸ್ಸು 22-25 ಇರಬಹುದು. ಅವರ ಹೆಸರನ್ನು ಉಲ್ಲೇಖಿಸಿವ 9 ಶಿಲಾ ಶಾಸನಗಳು ಶ್ರೀ ಕೂರ್ಮಮ್, ಸಿಂಹಾಚಲಮ್ ಮೊದಲಾದ ಕಡೆ ದೊರೆತಿವೆ.
ಒಡ್ಡವಾಡಿಯ ಮತ್ಸ್ಯ ವಂಶದ ದೊರೆಗಳು ಇವರ ಪ್ರಭಾವಕ್ಕೊಳಗಾಗಿ ವೈಷ್ಣವರಾದರು. ಇವರಲ್ಲಿ ಅರ್ಜುನ ನರಸಿಂಹ ವರ್ಧನ ದೊರೆಯಾದ, ಅನ್ನಮರಾಜ ಗೋಪಾಲವರ್ಧನನಾದ. ಮುಂಜಾದಿತ್ಯ ಶ್ರೀರಂಗವರ್ಧನ ಎನಿಸಿದ. ಕಳಿಂಗ ಹಾಗೂ ಆಂಧ್ರದೇಶದ ಹಲವು ರಾಜರು, ಸಾಮಂತರು, ಸಾಮಾನ್ಯರು ಆಗ ವೈಷ್ಣವ ದೀಕ್ಷೆಯನ್ನು ಸ್ವೀಕರಿಸಿದರು. ಎರಡನೆಯ ನರಸಿಂಹನ ಕಾಲದಲ್ಲೂ ಅವರು ಕ್ರಿಯಾಶೀಲರಾಗಿದ್ದರು. ಮಧ್ವಮತ ಪ್ರಸಾರಕ್ಕಾಗಿ ಸಿಂಹಾಚಲಂ ನಲ್ಲಿ ಮಠವೊಂದನ್ನು ಸ್ಥಾಪಿಸಿದ್ದರು.  ಅಲ್ಲಿ 1373ರ ವರೆಗೂ ಮಠವೊಂದು ಅಸ್ತಿತ್ವದಲ್ಲಿತ್ತು, ಶ್ರೀ ಜಗನ್ನಾಥ ತೀರ್ಥರು ಅಲ್ಲಿ ನರಹರಿ ತೀರ್ಥ ಸಂಸ್ಥಾನದ ಯತಿಗಳಾಗಿದ್ದರು ಎಂದು ಸಿಂಹಾಚಲಮ್ ದೇವಸ್ಥಾನದ ಬಗ್ಗೆ ಡಾ| ಸುಂದರಂ ಅವರು ಬರೆದ ಪುಸ್ತಕದಲ್ಲಿ ಪ್ರಸ್ತಾಪಿಸಲಾಗಿದೆ. ಅದು ಉಚ್ಛ್ರಾಯ ಸ್ಥಿತಿಯಲ್ಲಿದ್ದು,  ಒಂದೆರಡು ಪೀಳಿಗೆಯ ನಂತರ ನಿಂತುಹೋಯಿತು ( ಡಾ| ಬಿಎನ್ ಕೆ ಶರ್ಮಾ ಅವರ ದ್ವೈತ ವೇದಾಂತದ ಇತಿಹಾಸ-ಸಾಹಿತ್ಯ ಪುಸ್ತಕ) .
ಶ್ರೀ ನರಹರಿ ತೀರ್ಥರು 1333ರಲ್ಲಿ ಹಂಪಿಯ ಬಳಿಯ ಚಕ್ರತೀರ್ಥದ ಹತ್ತಿರ ವೃಂದಾವನಸ್ಥರಾದರು. 
-


Monday, October 30, 2017

ಶ್ರೀ ಶ್ರೀಪಾದರಾಜರಿಗೆ ಹಾಗೆ ಕರೆದವರು ಯಾರು?



ಶ್ರೀರಘುನಾಥ ತೀರ್ಥರು ಹಾಗೂ ಶ್ರೀಶ್ರೀಪಾದರಾಜರ ಅನ್ಯೋನ್ಯ ಸಂಬಂಧ (2009) ) ಪುಸ್ತಕವನ್ನೋದಿ ನಮ್ಮ ಮಾಧ್ವ ವಿದ್ವಾಂಸರಲ್ಲಿ ಸಂಶೋಧನೆಯ ಬಗ್ಗೆ ಅತಿಕಡಿಮೆ ಗಮನವಿರುವುದು ತೀರಾ ಸ್ಪಷ್ಟವಾಗುತ್ತದೆ. ನಮಗೆ ಇಬ್ಬರೂ ಪೂಜ್ಯರೇ ಹೌದು. ನಾನೂ ಮುಳಬಾಗಿಲಿನಲ್ಲಿ ಹುಟ್ಟಿ ಈ ಕತೆಯನ್ನು ಹಲವಾರು ಬಾರಿ ಕೇಳಿ ಐತಿಹಾಸಿಕತೆ ಬಗ್ಗೆ ತಲೆಕೆಡಿಸಿಕೊಂಡು " ಅವರೇನೋ ಬರಕೋತಾರೆ, ಅದು ಮಠದ ಋಣ, ಅದಕ್ಕೆ ನೀನು ಯಾಕೆ ಒದ್ಯಾಡುತ್ತಿ? ಎಂದು ತಂದೆಯಿಂದ ಹಗುರವಾಗಿ ಬೈಸಿಕೊಂಡೂ ಇದ್ದೇನೆ. 
 ಈ ಮೊದಲು ಪ| ಚಿಕ್ಕೆರೂರು ಗೋವಿಂದಾಚಾರ್ಯ, ಚೀ. ರಘುನಾಥಾಚಾರ್ಯ, ಈಗ ಮುಕ್ಕುಂದಿ ಶ್ರೀಕಾಂತಾಚಾರ್ಯರು ಈ ವಿಷಯದ ಬಗ್ಗೆ ಬರೆದಿದ್ದಾರೆ. 

. ಈ ಪುಸ್ತಕದ ೬೭ ಪುಟಗಳಲ್ಲಿ ವಿಷಯದ ಬಗ್ಗೆ ಇರುವುದುು. ೨೯-೬೭ರವರೆಗೆ ಮಾತ್ರ! ಉಳಿದಂತೆ ಶ್ರೀಪಾದರಾಜ ಮಠದ ಶ್ರೀಗಳ ಆಶೀರ್ವಚನದ ಹೊರತಾಗಿ ಹಲವು ವಿದ್ವಾಂಸರ, ಕುಂ ವ್ಯಾಸರಾಜ ಮಠದ, ಡಾ| ಶ್ರೀನಿವಾಸ ಹವನೂರ, ಪ್ರೊ| ಕೆಟಿ ಪಾಂಡುರಂಗಿಯವರ ಅನಿಸಿಕೆ, ಆಶೀರ್ವಾದ ವಚನಗಳಿವೆ! ಎಂದರೆ ಅದು ಆಗಿನ ಪೀಠಾಧಿಪತಿ ಶ್ರೀ ವಿಜ್ಞಾನನಿಧಿ ತೀರ್ಥರಿಗೂ ಸಮ್ಮತವಿರಲಿಲ್ಲ ಎಂದಾಯಿತು.  
 ಇಬ್ಬರು ಯತಿಗಳೂ ಸಮಕಾಲೀನರು ಎನ್ನುವ ಸಂದರ್ಭದ ಈ ಕತೆಗೆ ಪೂರಕವಾಗಿ ಶ್ರೀವ್ಯಾಸರಾಯರ ಪದದ ತುಣುಕೊಂದನ್ನೂ ಸೇರಿಸಲಾಗಿದೆ.
ಇದು ಹೀಗಿದೆ:
ಪರಮತಘನವನ ಪಾವಕನೆ 
ಶರಣು ಭೂಸುರನುತ ಸಿರಿ ನಾರಾಯಣ ಯೋಗಿ|
---------------------------------
ಸುರನಾಥಪುರಕಂದು ವರ ಪುಷ್ಪವಿಮಾನದಿ
ಸರಿಯುತಲಿರೆ ರಘುನಾಥೇನ್ದ್ರರ ವರ
ವೃಂದಾವನ ಪ್ರದಕ್ಷಿಣೆಯ್ಲೀಕ್ಷಿಸಿ ಕರೆದು ಭಾಷಿಸಿ
ಕಳುಹಿದಾಶ್ಚರ್ಯಚರಿತಾ|| 
ಈ ಕೃತಿ ಕೇವಲ ಎರಡು ಹಸ್ತಪ್ರತಿಗಳಲ್ಲಿ ಮಾತ್ರ ಲಭ್ಯ!!
ನನಗೆ ತಿಳಿದಂತೆ ಶ್ರೀಪಾದರಾಜರ ಲಾಲಿ ಹಾಡುಗಳು ಸುಪ್ರಸಿದ್ಧವಾಗಿ ಮನೆ ಮಾತಾಗಿದೆ. 

ಜೋ ಜೋ ಶ್ರೀರಂಗಧಾಮಾ .... ಮತ್ತು ಲಾಲಿ ಗೋವಿಂದ ಲಾಲಿ.. ಇಂದಿಗೂ ಕನ್ನಡಿಗರ ಮನೆಮಾತಾಗಿದೆ. ಇದುವರೆಗೂ ಗುಪ್ತವಾಗಿದ್ದ
" ತೂಗಿರೆ ರಾಮನ| ತೂಗಿರೆ ವ್ಯಾಸನ|

 ತೂಗಿರೊ ವಿಠಲನ್ನ| " ಈಗ ಪ್ರತ್ಯಕ್ಷವಾಗಿದೆ.
 ಡಾ | ಶ್ರೀನಿವಾಸ ಹಾವನೂರರು ನಾನು ಉದಯವಾಣಿಯಲ್ಲಿದ್ದಾಗ,  ( 1979) " ತೂಗಿರೆ ರಾಯರ| ತೂಗಿರೆ ಗುರುಗಳ"  ಎಂಬ  ಕೃತಿಯನ್ನ್ನುಕಟುವಾಗಿ ಟೀಕಿಸಿದ್ದ್ದದರು

. ಈ ಒಂದು , ಉಲ್ಲೇಖ ಬಿಟ್ಟರೆ, ಶ್ರೀರಘುನಾಥ ತೀರ್ಥರ ಕೃತಿಗಳು, ಬದುಕು ಈ ಬಗ್ಗೆ ನನಗೆ ಯಾವ  ಮಾಹಿತಿಯೂ ಸಿಗಲಿಲ್ಲ. ಈ ಅನಾಮಿಕ ಸ್ವಾಮಿಗಳು ಶ್ರೀ ಶ್ರೀಪಾದರಾಜರಿಗೆ ಪ್ರೇರಕ ಶಕ್ತಿಯಾದರು ಎನ್ನುವುದೇ ಆಶ್ಚರ್ಯಕರವಾದ ಮಾಹಿತಿ. ಇತಿಹಾಸದಲ್ಲಿ ಆಸಕ್ತರು ಓದಿ ಈ ಪುಸ್ತಕವನ್ನು ಪಕ್ಕಕಿಡಬಹುದು.  ಭಾವುಕರು, ಮಠದ ಕಟ್ಟಾ ಅನುಯಾಯಿಗಳು ಭಲೇ ಎನ್ನಬಹುದು. ಎರಡೂ ಅಲ್ಲದ ನಾನು ಈ ಪುಸ್ತಕದ ಅಗತ್ಯವಾದರೂ ಹೊಸದಾಗಿ ಏನಿತ್ತು? ಎಂದು ಅಚ್ಚರಿಯಿಂದ ಕೇಳಲೂಬಹುದು.