ವಿಶೇಷವೆಂದರೆ ಮುಳಬಾಗಿಲಿನಲ್ಲಿ ಎಣಿಕೆಯಷ್ಟು ಮಂದಿ ಶ್ರೀಪಾದರಾಜ ಮಠದ ಶಿಷ್ಯರಾಗಿದ್ದು, ಬಹುತೇಕರು ಶ್ರೀ ಸತ್ಯಪ್ರಿಯರು ಅಥವಾ ಅವರಿಗಿಂತ ಮೊದಲು ಉತ್ತರಾದಿ ಮಠೀಯರಾಗಿರುವುದು, ಕೆಲವರು ಶ್ರೀ ವ್ಯಾಸರಾಜ ಮಠದವರಾಗಿರುವುದೂ ಹೌದು.
ಶ್ರೀಪಾದರಾಜರಿಂದಲೇ ಈ ಮಠ ಪ್ರಸಿದ್ಧಿ ಪಡೆದ ಕಾರಣ ಅದೇ ಹೆಸರಿನಿಂದ ವಾದಿರಾಜರ ಕಾಲದಿಂದಲೂ ಉಲ್ಲೇಖಿತವಾಗಿದೆ. ವ್ಯಾಸನಕೆರೆ ಪ್ರಭಂಜನ ಅವರು ಹೇಳುವಂತೆ, ಬೇಲೂರಿನ ಸ್ತಂಭವೊಂದ ಮೇಲಿನ ‘ ಕಂಜನಾಭ ತೀರ್ಥರು ಪದ್ಮನಾಭ ತೀರ್ಥರೆಂದು ಕೇವಲ ಊಹಿಸಬಹುದು. ಇಲ್ಲದಿದ್ದರೆ, ಅಲ್ಲೊಂದು ಮಾಧ್ವ ಮಠವಿರಬೇಕಾಗಿತ್ತು, ಆದರೆ ಇಲ್ಲ. ಆದ್ದರಿಂದ ವಾದಿರಾಜರ ಮಾತು
‘ ಲಕ್ಸ್ಮೀನಾರಾಯಣಮುನೇಃ ವಿಬುಧೆಂದ್ರಾರ್ಯ ಯೋಗಿನಃ |
ವ್ಯಾಸತೀರ್ಥ ಮುನೇಶ್ಚಾಪಿ ಜಯತೀರ್ಥಾದಿರೇವ ಹಿ||
ಎಂಬ ಶ್ಲೋಕದಲ್ಲಿ ಸ್ಪಷ್ಟವಾಗಿ ಉಲ್ಲೇಖಿತವಾಗಿರುವ ಶ್ರೀಪಾದರಾಜ ಮಠ, ವಿಬುಧೇಂದ್ರ ಮಠ( ಈಗಿನ ರಾಯರ ಮಠ) ವ್ಯಾಸರಾಜ ಮಠ – ಈ ಮಠತ್ರಯಕ್ಕೂ ಶ್ರೀ ಜಯತೀರ್ಥರು “ ಆದಿ ಗುರುಗಳಾಗಿ’ ಆದರಣೀಯರೆನಿಸಿದ್ದಾರೆ. ಇಲ್ಲಿ ಶ್ರೀ ವಾದಿರಾಜರು ಸುಳ್ಳು ಹೇಳುವ ಅಗತ್ಯವೇ ಇಲ್ಲ. ಕಾರಣ ಅವರು ಉಡುಪಿಯ ಶ್ರೀ ವಿಷ್ಣುತೀರ್ಥ ( ಸೋದೇ) ಮಠದ ಯತಿಗಳು ಮತ್ತು ಶ್ರೀ ಶ್ರೀಪಾದರಾಜ-ಶ್ರೀ ವ್ಯಾಸರಾಜರ ನಿಕಟ ಪರಿಚಯವಿದ್ದವರು. ಒಂದು ಸಂಪ್ರದಾಯದಂತೆ ಶ್ರೀ ವ್ಯಾಸತೀರ್ಥರೆ ವಾದಿರಾಜರ ವಿದ್ಯಾಗುರುಗಳು ಎಂಬ ನಂಬಿಕೆ ಇದೆ. ಶ್ರೀ ವಾದಿರಾಜ ವಿರಚಿತ ಅಶ್ವಧಾಟಿಯ “ ದ್ವೈಪಾಯನೋತ್ತಮ...’ ಎಂಬ ಶ್ರೀಪಾದರಾಜಸ್ತೋತ್ರವಿದೆ.
ಇಲ್ಲಿ ನಾನು ಪ್ರಸ್ತುತಪಡಿಸುವುದಿಷ್ಟೆ. ಭೌಗೋಳಿಕ ಕಾರಣಗಳಿಂದಾಗಿ, ಮಾಧ್ವರು ಹಲವು ಮಠಗಳ ಶಿಷ್ಯರಾಗಿದ್ದರೂ ಮೂಲ ಗುರುಗಳು ಶ್ರೀಮನ್ ಮಧ್ವಾಚಾರ್ಯರೆ ಅಲ್ಲವೇ? ತಮ್ಮ ಅಂತ್ಯಕಾಲ ಸಮೀಪಿಸಿದಾಗ, ಅವರು ಅಲ್ಲಿಯೇ ವೃಂದಾವನಸ್ಥರಾಗಿದ್ದಾರೆ. ಇಂಥಾ ಸರಳ ಸತ್ಯವನ್ನು ಅರ್ಥ ಮಾಡಿಕೊಳ್ಳದೆ ನಮ್ಮದು ಮೂಲ ಮಠ ಎಂದು ಯಾರೂ ಕಚ್ಚಾಡುವ ಅಗತ್ಯವೇ ಇಲ್ಲ. ಎಲ್ಲ ಮಾಧ್ವ ಮಠಗಳಿಗೂ ಶ್ರೀ ಮಧ್ವರು, ಶ್ರೀ ಪದ್ಮನಾಭ ತೀರ್ಥರು ಮೂಲ ಮತ್ತು ಪ್ರಥಮ ಗುರುಗಳು ಎಂದರ್ಥಮಾಡಿಕೊಂಡರೆ ಸಾಕು. ನಮ್ಮ 100 ಮಂದಿ ಮಾಧ್ವರಲ್ಲಿ 4 ಮಂದಿ ಸಂಸ್ಕೃತ ಬಲ್ಲವರು, ಅದರಲ್ಲಿ ಇಬ್ಬರು ಶಾಸ್ತ್ರಾಧ್ಯಯನ ಮಾಡಿದವರು, ಉಳಿದವರು ಹರಿದಾಸರ ಮೂಲಕವೋ ಕನ್ನಡ ಲಿಪಿಯ ಅನುವಾದಿತ ಗ್ರಂಥಗಳ ಸಹಾಯದಿಂದಲೋ ಯಥಾ ಶಕ್ತಿ ಮಧ್ವಮತದ ಸಿದ್ಧಾಂತವನ್ನು ಸ್ವಲ್ಪ ಅರಿತವರು. ಆದರೆ ಮಠದ ವಿಷಯ ಬಂದಾಗ ನಮ್ಮದೇ ಮೂಲ ಮಠ ಎಂದು ವಾದಿಸುವುದು ನಿರರ್ಥಕ ಮತ್ತು ವಿಹಿತವಲ್ಲ ಎಂದು ನನ್ನ ಅನಿಸಿಕೆ.
No comments:
Post a Comment