ನಮ್ಮ ವೈದಿಕ
ಋಷಿಗಳು ತೀರಾ ಸಾಮಾನ್ಯರಂತೆ ಬದುಕಿದವರು. ಅವರಲ್ಲಿ ಅನೇಕರು ಕೃಷಿಕ, ರಥಕಾರ, ಬಡಗಿ, ನೇಯ್ಗೆ ವೃತ್ತಿಗಳಲ್ಲಿ ತೊಡಗಿದ್ದವರು. ಅವರಲ್ಲಿ ಹಲವರು
ಬ್ರಾಹ್ಮಣ ವರ್ಣದವರೂ ಇದ್ದರು. ಉಪನಿಷತ್ತುಗಳಲ್ಲಿ ಕಾಣಬರುವ ಋಷಿಗಳಲ್ಲಿ ರೈಕ್ವ ಎಂಬ ಹೆಸರಿನ ಋಷಿಯ
ಹೆಸರು ಛಾಂದೋಗ್ಯ ಉಪನಿಷತ್ತಿನಲ್ಲಿ ಬರುತ್ತದೆ. ಅವರು ಒಬ್ಬ ರಥಕಾರ, ಎಂದರೆ
ಗಾಡಿಕಾರರು. ರಥಗಳನ್ನು ತಾವೇ ತಯಾರಿಸಿ, ಯಾರಿಗೆ ಪ್ರಯಾಣದ ಅಗತ್ಯವಿದೆಯೋ
ಅವರನ್ನು ಅವರ ಊರಿಗೆ ತಲಪಿಸುತ್ತಿದ್ದವರು.
ರೈಕ್ವರ ತಪಸ್ಸು, ವೃತ್ತಿಪರತೆ ಆಗಿನ ಎಲ್ಲರಿಗೂ
ತಿಳಿದಿತ್ತು. ಆ ಕಾಲದಲ್ಲಿ ಮೃಗ ಪಕ್ಷಿಗಳೂ ಮಾನವ ಭಾಷೆಯನ್ನು ಅರ್ಥ ಮಾಡಿಕೊಳ್ಳುತ್ತಿದ್ದವು. ಅದೇ
ರೀತಿ ಮಾನವರಿಗೂ ಆ ಪ್ರಾಣಿ-ಪಕ್ಷಿಗಳ ಮಾತು ಅರ್ಥವಾಗುತ್ತಿತ್ತು.
ಆ ಪ್ರಾಂತವನ್ನು
ಜಾನಶೃತಿ ಎಂಬ ಬುದ್ಧಿವಂತ ದೊರೆ ಆಳುತ್ತಿದ್ದ. ಅವನು ಜ್ಞಾನಿ, ಉದಾರಿ, ದಯಾಪರ ಮತ್ತು ಜನಾನುರಾಗಿಯಾಗಿದ್ದವನು. ಆತನಿಗೆ ತನ್ನಷ್ಟು ಉದಾರಿ, ಜ್ಞಾನಿ,
ಕರುಣಾಳು ಆ ಸುತ್ತಲಿನಲ್ಲೇ ಯಾರೂ ಇಲ್ಲ ಎನ್ನುವ ಹಮ್ಮು ಆಗಾಗ ತಲೆ ಹಾಕುತ್ತಿತ್ತು.
ಅದನ್ನು ತನ್ನ ಮಂತ್ರಿಗಳಿಗೆ, ವಿದ್ವಾಂಸರಿಗೆ ಮತ್ತು ಅರಮನೆಯ ಸಿಬ್ಬಂದಿಗೆ
ಹೇಳಿಕೊಳ್ಳುತ್ತಿದ್ದ. ಅವರು ‘ ಹೌದು, ಹೌದು’
ರಾಜನ್ ಎಂದು ತಲೆಯಾಡಿಸಿ ಆತನನ್ನು ಮತ್ತಷ್ಟು ಹೊಗಳುತ್ತಿದ್ದರು.
ಆ ದೊರೆಯು ತಾನು
ತನ್ನ ರಾಜ್ಯದ ಪ್ರಜೆಗಳಿಗೆ ಎಷ್ಟು ಸಹಾಯ ಮಾಡಿದೆ ಎಂದು ಲೆಕ್ಕವನ್ನೂ ಇಡುತ್ತಿದ್ದವನು. ಮತ್ತೊಂದು
ಸಂಗತಿ ಎಂದರೆ ಆತನಿಗೆ ಪಶು-ಪಕ್ಷಿಗಳ ಭಾಷೆಯೂ ಅರ್ಥವಾಗುತ್ತಿತ್ತು. ಒಂದು ರಾತ್ರಿ ಆ ದೊರೆ ತನ್ನ
ಉಪ್ಪರಿಗೆಯ ಮೇಲಿನ ಮಲಗುವ ಕೋಣೆಯಲ್ಲಿ ನಿದ್ರೆ ಮಾಡುತ್ತಿದ್ದ, ‘ ಆಹಾ! ಎಂತಹ ಬೆಳುದಿಂಗಳು,
ತಂಪು ಗಾಳಿ, ಎಲ್ಲಿಯೋ ಪಕ್ಷಿಗಳ ಕಲರವ ಎಂದು ರಾತ್ರಿಯ
ಸೊಬಗನ್ನು ಸವಿಯುತ್ತಿದ್ದ.
ಆಗ ಆತನ ಕೋಣೆಯ
ಪಕ್ಕದಲ್ಲಿ ಎರಡು ಪಕ್ಷಿಗಳು ಪುರ್ರನೆ ಹಾರುವ ಮೊದಲು, ಒಂದು ಪಕ್ಷಿ ತನ್ನ ಸಂಗಾತಿಯನ್ನು ಕೇಳಿತು:
‘ ಪ್ರಿಯೇ! ಕೋಣೆಯಲ್ಲಿ ಆ ರಾಜನ ಪ್ರಕಾಶ ಎಷ್ಟು ಚೆನ್ನಾಗಿ ಹೊಮ್ಮುತ್ತಿದೆಯಲ್ಲವೇ?
ಅದರ ಹತ್ತಿರ ಸುಳಿಯಬೇಡ, ಸುಟ್ಟು ಬೂದಿಯಾಗುವೆ,
ಆತನಷ್ಟು ಧರ್ಮಾತ್ಮ, ಉದಾರಿ ಯಾರೋ ಇಲ್ಲ, ನೆನಪಿರಲಿ’ ಆಗ ಮತ್ತೊಂದು ಪಕ್ಷಿ ಉತ್ತರಿಸಿತು: ‘ ಅಯ್ಯೋ ಪುಣ್ಯಾತ್ಮ! ಅವನೇನು ನಮ್ಮ ಗಾಡಿಕಾರ ರೈಕ್ವರಿಗಿಂತ ದೊಡ್ಡವನೇ? ಈ ರಾಜನೊಬ್ಬ ಹುಚ್ಚ, ಸದಾ ಆತ್ಮ ಪ್ರಶಂಸೆಯಲ್ಲಿ ತೇಲಿ ಮುಳುಗುವುವನು.
ಅವನು ದಾನಿಯಾಗಿರಬಹುದು, ಆದರೆ ತಾನು ಅದು ಕೊಟ್ಟೆ ಇದು ಕೊಟ್ಟೆ ಎನ್ನುವ
ಜಂಬ ಅವನಿಗೆ ಸದಾ ಇದೆಯಲ್ಲ: ಸದಾ ಯಾರಾದರೂ ಹೊಗಳಿಯಾರು ಎಂದು ಹಾತೊರೆಯುತ್ತಿರುತ್ತಾನೆ,
ಏನು ಪುಣ್ಯ ಬಂತು ಇದರಿಂದ?’ ಆಗ ಮೊದಲ ಪಕ್ಷಿಗೆ ಆಶ್ಚರ್ಯವಾಯಿತು.
‘ ಯಾರೀ ರೈಕ್ವರು? ಅವರು ಗಾಡಿಕಾರರು ಎನ್ನುತ್ತೀಯ,
ರಾಜನಿಗಿಂತ ಉತ್ತಮರೇ ಆತ? ಎಂದು ಕೇಳಿತು.
ಪಕ್ಷಿಗಳ ಭಾಷೆ ಅರ್ಥವಾದ ರಾಜನು ನಿದ್ರೆಯಿಂದ ಎದ್ದು ಕುಳಿತ. ಅಷ್ಟರಲ್ಲಿ ಆ ಪಕ್ಷಿಗಳ ಜೋಡಿ
ಹಾರಿ ಮರೆಯಾಗಿದ್ದವು. ರಾಜನಿಗೆ ನಿದ್ದೆ ಹಾರಿ ಹೋಯಿತು. ಯಾರೀ ರೈಕ್ವ? ನನಗಿಂತ ದಾನಿಯೇ? ಉದಾರಿಯೇ? ಆತ ಎಲ್ಲಿದ್ದಾನೋ? ಹೀಗೆಲ್ಲಾ ಯೋಚಿಸತೊಡಗಿದ. ‘ ಈ ರೈಕ್ವ ಯಾರು? ಯಾವ ಪ್ರಸಿದ್ಧಿ, ಹೆಸರಿಗೂ
ಸಿಲುಕದೆ ಇರುವ ಈತ ಯಾರು? ಆತನನ್ನು ತಾನು ಕಾಣಲೇಬೇಕು, ಎಂದು ನಿರ್ಧರಿಸಿದ. ಅದೇ ಅವನಿಗೆ ಸದಾ ಯೋಚನೆಯ ವಿಷಯವಾಯಿತು.
ಆಗ ಮಹಾರಾಜ ಜಾನಶೃತಿಯು ಈ ವ್ಯಕ್ತಿಯನ್ನು ಹುಡುಕಿತರಲು ತನ್ನ ಬುದ್ಧಿವಂತ ಮಂತ್ರಿಯನ್ನು
ಇದೇ ಕೆಲಸಕ್ಕಾಗಿ ಕಳುಹಿಸಿದ: ‘ ಎಲ್ಲಿದ್ದರೂ ಸರಿ, ಆ ರೈಕ್ವರನ್ನು ನೀನು ಹುಡುಕಿ ತರಲೇಬೇಕು’ ಎಂದು ಆಜ್ಞೆ ಮಾಡಿ
ಕಳುಹಿಸಿದ. ಆ ಮಂತ್ರಿ ಎಲ್ಲಿ ಸಾಧ್ಯವೋ, ಜನವಸತಿ ಇದೆಯೋ, ಋಷಿಗಳ ಆಶ್ರಮ ಇದೆಯೋ ಎಲ್ಲ ಕಡೆ ರೈಕ್ವರಿಗಾಗಿ ಹುಡುಕಿದ. ಹೀಗೆಯೇ ದಿನಗಳು ಕಳೆದವು. ಈ
ಕೆಲಸ ಅಷ್ಟು ಸುಲಭ ಸಾಧ್ಯವಾಗಿರಲಿಲ್ಲ: ರೈಕ್ವ ಯಾವ ದೊಡ್ಡ ಮನುಷ್ಯನೂ ಅಲ್ಲವಷ್ಟೆ? ಆತನೊಬ್ಬ ಗಾಡಿಕಾರ: ಯಾರು ಎಂದು ಗುರುತಿಸಿ ಹುಡುಕುವುದು? ಎಂದು
ಚಿಂತೆಗೀಡಾದ.
ಆ ದಾರಿಯಲ್ಲಿ ಒಬ್ಬ ದಾರಿಹೋಕ ಸಿಕ್ಕವನು: ‘ ಅದೋ ನೋಡಿ, ಆ ಗಾಡಿಯ ಕೆಳಗೆ ನುಸುಳಿ ಮೈ ಕೆರೆದುಕೊಳ್ಳುತ್ತಿದ್ದಾನಲ್ಲ,
ಅವನೇ ರೈಕ್ವ ಇರಬಹುದು, ಅವನ ಹೆಸರೂ ಅದೇ; ಎಂದು ಸೂಚಿಸಿದ. ಮಂತ್ರಿಯು ಅಳುಕಿನಿಂದಲೇ ‘ ಅಯ್ಯ! ನಿನ್ನ ಹೆಸರು ರೈಕ್ವನೇ? ‘ ಎಂದಾಗ,
ಹೌದು ಸ್ವಾಮಿ, ನನ್ನನ್ನು ರೈಕ್ವ ಎಂದು ಜನರು ಕರೆಯುತ್ತಾರೆ’ ಎಂದು ನುಡಿದ. ಆ ಮಂತ್ರಿಯು ಕೂಡಲೇ ಅರಮನೆ
ತಲಪಿ. ‘ ರಾಜನ್! ನೀವು ಹೇಳಿದ ರೈಕ್ವ ಎಂಬಾತನನ್ನು ಗುರುತಿಸಿದ್ದೇನೆ’
ಎಂದು ಸುದ್ದಿ ತಲಪಿಸಿದ. ರಾಜಾ ಜಾನಶೃತಿಗೆ ಸಂತೋಷವಾಯಿತು.
ಆಗ ರಾಜನು ತನ್ನ ಅತಿಥಿಯಾಗಿ ಆಗಮಿಸಲಿರುವ ರೈಕ್ವ ಮುನಿಗೆ ಅದ್ದೂರಿಯ ಆತಿಥ್ಯವನ್ನೇ ಏರ್ಪಡಿಸಿದ.
ಆತನನ್ನು ಎದಿರುಗೊಳ್ಳಲು 600 ಹಸುಗಳು, ಅದನ್ನು ಕಟ್ಟಲು
ಚಿನ್ನದ ಸರಪಳಿ, ಮತ್ತು ಕುದುರೆಯ ರಥವನ್ನು ತೆಗೆದುಕೊಂಡು ತನ್ನ ಅರಮನೆಯ
ಮಹಾ ದ್ವಾರದಲ್ಲಿ ಕಾದು ನಿಂತ. ರೈಕ್ವ ಮುನಿಯು ಅಲ್ಲಿಗೆ ಬಂದೊಡನೆ ಅವನ್ನೆಲ್ಲಾ ಆತನಿಗೆ ಭಕ್ತಿಯಿಂದ
ಅರ್ಪಿಸಿ, ‘ ಸ್ವಾಮಿ! ತಾವು ಇದನ್ನು ಕೃಪೆಯಿಟ್ಟು ಸ್ವೀಕರಿಸಿ ನನಗೆ ಬ್ರಹ್ಮ
ಜ್ಞಾನವನ್ನು ಉಪದೇಶಿಸಿ ಎಂದು ವಿನಯದಿಂದ ಪ್ರಾರ್ಥಿಸಿದ.
ಆಗ ರೈಕ್ವನು “ ರಾಜನ್! ಮೊದಲು ಈ ಹಸುಗಳು, ಚಿನ್ನದ ಸರಪಳಿ, ರಥ ಎಲ್ಲವನ್ನೂ ವಾಪಸು ತೆಗೆದುಕೋ, ನನ್ನ ಬ್ರಹ್ಮ ವಿದ್ಯೆಯು ಮಾರಾಟಕ್ಕಲ್ಲ’ ಎಂದು ನೇರವಾಗಿ ತಿಳಿಸಿದನು.
ಆಗ ರಾಜನು ಹಿಂತಿರುಗಿ ಬಂದು ತನ್ನ ಜೊತೆಯಲ್ಲಿ 1000 ಹಸುಗಳು, ಗಟ್ಟಿ ಚಿನ್ನದ
ಹಗ್ಗ, ರ್ಸ್ಥ ಮತ್ತು ತನ್ನ ಮಗಳನ್ನು ಪತ್ನಿಯಾಗಿ ಸ್ವೀಕರಿಸಿರಿ ಎಂದು ಬಳುವಳಿಯಾಗಿ
ರೈಕ್ವರಿಗೆ ತಂದು ಒಪ್ಪಿಸಿದ. ಮತ್ತೆ ರಾಜನು, ‘ ಆರ್ಯ, ನನಗೆ ಆತ್ಮ ವಿದ್ಯೆ ಕಲಿಯಲು ಆಸೆಯಾಗಿದೆ, ದಯಮಾಡಿ ಅದನ್ನು ಉಪದೇಶಿಸಿ’
ಎಂದು ಮತ್ತೆ ಮತ್ತೆ ಪ್ರಾರ್ಥಿಸಿದ.
ರೈಕ್ವರಿಗೆ ರಾಜನ ಯಾವ ಉಡುಗೊರೆಯಿಂದಲೂ ಆಸೆ ಹುಟ್ಟಲಿಲ್ಲ, ಆದರೆ ಜಾನಶೃತಿ ರಾಜನ ಜ್ಞಾನದಾಹ ಮತ್ತು ಸಹನೆಯಿಂದ ಆತನಿಗೆ ಸಂತೋಷವಾಗಿತ್ತು.
ಈ ಎರಡು ಗುಣಗಳು ಒಬ್ಬ ಸಾಧಕನಿಗೆ ಅತ್ಯವಶ್ಯ ಎಂದು ಮನಗಂಡ ರೈಕ್ವರು ರಾಜನನ್ನು ತಮ ಶಿಷ್ಯರಾಗಿ ಸ್ವೀಕರಿಸಿದರು.
ಆಗ ರೈಕ್ವರು ನುಡಿದರು: ‘ಅಯ್ಯಾ ರಾಜ! ಈ
ಜಗತ್ತಿನಲ್ಲಿ ನಾವು ಅನೇಕ ಶಕ್ತಿಗಳನ್ನು ದೈವ ಶಕ್ತಿ ಎಂದು ಪೂಜೆ ಆರಾಧನೆಗಳನ್ನು ನಡೆಸುತ್ತೇವೆ,
ಈ ಗಾಳಿ ನೋಡು, ಎಲ್ಲವನ್ನೂ ಹಾರಿಸಿಕೊಂಡು ಒಯ್ಯುತ್ತದೆ,
ಬೆಂಕಿ ತನ್ನ ಹತ್ತಿರ ಬರುವ ವಸ್ತುಗಳನ್ನು ಸುಡುತ್ತದೆ, ನಾವು ಉಸಿರಾಟ ನಡೆಸುವುದರಿಂದ ಬದುಕಿದ್ದೇವೆ ಎಂದು ತಿಳಿಯುತ್ತೇವೆ. ಆದರೆ, ಇವೆಲ್ಲವನ್ನೂ ಒಳಗೆ ನಿಯಂತ್ರಿಸುವ ಒಂದು ಮಹಾನ್ ಶಕ್ತಿ ಇದೆ. ಈ ಮಹಾ ಶಕ್ತಿಯನ್ನು ಯಾರೂ
ನಿರ್ಮಿಸಲು ಸಾಧ್ಯವಿಲ್ಲ. ಅದು ತನಗೆ ತಾನೇ ಜನಿಸುತ್ತದೆ; ಅದು ಉಳಿದೆಲ್ಲವನ್ನೂ
ಸೃಜಿಸಿ ನಿಯಂತ್ರಿಸುತ್ತದೆ, ಹೀಗಾಗಿ ನಮ್ಮ ಇಡೀ ಸೃಷ್ಟಿಯೇ ಈ ದಿವ್ಯ ಶಕ್ತಿಯಿಂದ
ಹೊರಟದ್ದು. ಆದರೆ, ಅದು ತುಂಬಾ ಜಟಿಲವಾದದ್ದು. ಯಾರಿಗೂ ಅರ್ಥವಾಗದ್ದು.
ಎಲ್ಲವೂ ಈ ಮೂಲ ಶಕ್ತಿಯ ಸೃಷ್ಟಿಯಾಗಿ, ಅದರ ನಿರ್ದೇಶದಿಂದಲೇ ತನ್ನ ಕಾರ್ಯವನ್ನು
ಮಾಡುತ್ತದೆ. ಜಗತ್ತಿನ ಎಲ್ಲಾ ಆಗುಹೋಗುಗಳೂ ಇದರ ಆದೇಶಿದಿಂದಲೇ ನಡೆಯುತ್ತವೆ’ ಎಂದು ರೈಕ್ವರು ತಿಳಿಸಿದರು.
‘’ ರಾಜನ್! ನೀನು
ದಾನ ಮಾಡಿದ ವಸ್ತುಗಳನ್ನು ನೀನು ನಿರ್ಮಿಸಿದೆಯಾ, ನೋಡು. ಯಾವುದೂ ನಿನ್ನದಾಗಿ ಇರಲಿಲ್ಲ; ಮುಂದೆಯೂ ಇಲ್ಲದಿರಬಹುದು. ನೀನು ಈಗ
ನಿನ್ನ ಅರಮನೆಗೆ ತೆರಳು, ದಾನ ಮಾಡು, ಪರೋಪಕಾರ ಮಾಡು, ಆದರೆ ನಾನು ಕೊಟ್ಟೆ ಎನ್ನುವ ಅಹಂಕಾರ ನಿನಗೆ
ಬಾರದಿರಲಿ’ ಕೀರ್ತಿಗಾಗಿ ದಾನ ಮಾಡಬೇಡ. ಆ ವಸ್ತು ನಿನ್ನದು, ಅದನ್ನು ಮತ್ತೊಬ್ಬರಿಗೆ ನಾನು ಕೊಡುತ್ತಿದ್ದೇನೆ ಎನ್ನುವ ಅಹಂಕಾರ, ನನ್ನದೆನ್ನುವ ಹಮ್ಮು ನಿನಗೆ ಬರಬಾರದು. ಅದು ಆ ಪರಮಾತ್ಮ ನಿನಗೆ ಕೊಟ್ಟದ್ದು ಅದನ್ನು ಮತ್ತೊಬ್ಬರ
ಕೈಗೆ ನಿನ್ನಿಂದ ಕೊಡಮಾಡಿಸುವುದು, ಅಷ್ಟೆ. ಇದರಲ್ಲಿ ನಿನ್ನದೆನ್ನುವುದು
ಯಾವುದೂ ಇಲ್ಲ, ಇದು ನಿಜವಾದ ಜೀವನ ಸತ್ಯ. ಯಾರು ಈ ಸತ್ಯವನ್ನು ಅರಿತಿದ್ದಾನೆಯೋ
ಅವನು ಜ್ಞಾನಿ, ಉಳಿದವರು ಹಾಗೆ ಭಾವಿಸುವವರು ಅಷ್ಟೆ’
ಈ ರೀತಿ ವಸ್ತುಗಳ ಮೇಲೆ ನಿರ್ಭಾವುಕತೆಯಿಂದ ನೋಡುವವನು ನಿತ್ಯ ಸುಖಿ, ಸಂತೋಷ ಚಿತ್ತನು, ಆತನೇ ಋಷಿ ಎನಿಸುತ್ತಾನೆ. ಉಳಿದವರು ಈ ಸುಖವನ್ನು ಅನುಭವಿಸಲಾರರು.
ಅವರಿಗೆ ಶಾಶ್ವತ ಸುಖವೆಂದರೇನು ಎಂದು ತಿಳಿಯುವುದೇ ಇಲ್ಲ.
ರಾಜನಿಗೆ ರೈಕ್ವರ ಉಪದೇಶದಿಂದ ಒಳಗಣ್ಣು ತೆರೆಯಿತು, ಆತನು ಇನ್ನೂ ಹೆಚ್ಚು ಪ್ರಜಾ ವಾತ್ಸಲ್ಯದಿಂದ ಉದಾತ್ತ ರಾಜನಾಗಿ ಯಶಸ್ಸು, ಕೀರ್ತಿ ಮತ್ತು ಬ್ರಹ್ಮಜ್ಞಾನಗಳನ್ನು ಗಳಿಸಿ ಧನ್ಯನಾದ. ಈ ಬಾರಿ ರೈಕ್ವರು ರಾಜನು ಕೊಟ್ಟ
ಉಡುಗೊರೆಗಳನ್ನು ಸ್ವೀಕರಿಸಿ, ಆಶೀರ್ವದಿಸಿದರು. ಆಗ ಜಾನಶೃತಿಯು
ರಾಜರ್ಷಿ ಎನಿಸಿ, ಪ್ರಜಾ ವತ್ಸಲನಾದ.
ಛಾಂದೋಗ್ಯ ಉಪನಿಷತ್ತಿನ ಈ ಪ್ರಸಂಗದಿಂದ ನಮಗೆ ತಿಳಿದುಬರುವ ಸತ್ಯವೆಂದರೆ, ನಮಗೆ ಬರುವ, ಬಂದಿರುವ ಸಂಪತ್ತು, ಐಶ್ವರ್ಯಗಳು ದೈವ ದತ್ತವಾದವು; ಇದರ ಮೇಲಿನ ಪೂರ್ಣ ಸ್ವಾಮ್ಯ ನಮ್ಮದಲ್ಲ, ನಮ್ಮ ಸ್ವತ್ತಿನ ಸ್ವಲ್ಪ ಭಾಗವನ್ನಾದರೂ, ಅರ್ಹರಿಗೆ, ಯೋಗ್ಯರಿಗೆ, ಅಗತ್ಯವಿರುವವರಿಗೆ ಕೊಡಬೇಕು. ಆಗ
ಮಾತ್ರ ನಾವು ನಮಗೆ ಇದನ್ನು ಕೊಡಮಾಡಿದ ಆ ಪರಮಾತ್ಮನಿಗೆ ಕೃತಜ್ಞತೆ ಅರ್ಪಿಸಿದಂತಾಗುತ್ತದೆ.
No comments:
Post a Comment