Tuesday, February 13, 2024

- ಚಿದಂಬರಂ ನಟರಾಜ ದೇವಾಲಯ





ನಟರಾಜನ ವಿಶಿಷ್ಟ ಕಲಾದೇಗುಲ

ತಮಿಳು ನಾಡಿನ ಕಡಲೂರು ಜಿಲ್ಲೆಯ ಚಿದಂಬರಂ ದೇವಾಲಯವು ಇಡೀ  ಭಾರತದಲ್ಲಿನ ಶಿವ ದೇವಾಲಯಗಳಲ್ಲಿ ವಿಶಿಷ್ಟವಾದದ್ದು.    ಈ ಪುಟ್ಟ ಊರು ಪ್ರಾಚೀನ ಶಿವ ಕ್ಷೇತ್ರಗಳಲ್ಲಿ ಅಷ್ಟು  ಪ್ರಸಿದ್ಧವಾಗಿರಲಿಲ್ಲ. ಇದರ ಪೌರಾಣಿಕ ಕಥೆ, ಮಹಾತ್ಮೆಗಳು ಹೆಚ್ಚೇನೂ ಕಾಣಸಿಗುವುದಿಲ್ಲ. ಕಡಲ ಕಿನಾರೆಯ ಈ ಪ್ರದೇಶವನ್ನು 10ನೆಯ ಶತಮಾನದಲ್ಲಿ ಆಳುತ್ತಿದ್ದ ಚೋಳ ದೊರೆಗಳು ತಿಲ್ಲೈ ನಟರಾಜನನ್ನೇ ತಮ್ಮ ಕುಲದೇವತೆಯಾಗಿ ಪೂಜಿಸುತ್ತಿದ್ದವರು.

ಹೀಗಾಗಿ ಕಾಡುಮರಗಳ ಈ ಪ್ರದೇಶ ಶಿವ ಕ್ಷೇತ್ರವಾಯಿತು. ಪುರಾತನ ತಮಿಳು ಸಾಹಿತ್ಯವಾದ ಸಂಗಂ ಸಾಹಿತ್ಯ ಕಾಲದ ಉಲ್ಲೇಖಗಳಲ್ಲಿ ಈ ಕ್ಷೇತ್ರ ಕಾಣಿಸುವುದಿಲ್ಲ. 9-10ನೆಯ ಶತಮಾನ ಚೋಳರು ಇದನ್ನು ತಮ್ಮ ರಾಜಧಾನಿಯಾಗಿ ಮಾಡಿಕೊಂಡ ಕಾರಣ ಇಲ್ಲಿದ್ದ ಪುರಾತನ ಶಿವ ಕಾಮಿಯಮ್ಮನ್ ಮತ್ತು ನಟರಾಜನ ದೇವಾಲಯವನ್ನು ಅನೇಕ ಬಾರಿ ದುರಸ್ತಿ ಮಾಡಿ, ಶಿವ-ವಿಷ್ಣು ಪರಿವಾರದ ದೇವತೆಗಳ ಆಲಯಗಳನ್ನು ನಿರ್ಮಿಸಿದ್ದಾರೆ. ಪುರಾತನ ಉಲ್ಲೇಖಗಳಲ್ಲಿ ತಿಲ್ಲೈ ವನಂ, ಪೂನ್ನಂಬಳಂ, ಬ್ರಹ್ಮಪುರಿ ಎಂಬ ಹೆಸರುಗಳು ಈಗಿನ ಚಿದಂಬರಂ ಕ್ಷೇತ್ರಕ್ಕಿವೆ.

ಪುರಾತನ ತಮಿಳು ಬರವಣಿಗೆಯಲ್ಲಿ ಈ ಪ್ರದೇಶವು ತಿಲ್ಲೈ ಗ್ರಾಮ ಮಾತ್ರವಾಗಿತ್ತು. ಇಲ್ಲಿ ನಟರಾಜ ಪ್ರತ್ಯಕ್ಷನಾದ ಬಗ್ಗೆ ಹಲವು ಜಾನಪದ ಹಾಗೂ ಸ್ಥಳೀಯ ಕಥೆಗಳಿವೆ. ಒಮ್ಮೆ ಶಿವನು ಭಿಕ್ಷುವಿನ ಮಾರು ವೇಷದಿಂದ ಇಲ್ಲಿಗೆ ಬಂದನಂತೆ. ಈ ಅರಣ್ಯ ಪ್ರದೇಶದಲ್ಲಿ ತಪಸ್ಸು ಮಾಡುತ್ತಿದ್ದ ಪತಂಜಲಿ ಮತ್ತು ವ್ಯಾಘ್ರಪಾದ ಮುನಿಗಳಿಗೆ ಇಲ್ಲಿನ ದೇವದಾರು ಮರದ ಕಾಣಿಸಿದ ಶಿವ ಮತ್ತು ಶಿವಗಾಮಿ (ಪಾರ್ವತಿ) ಯರು ಇಲ್ಲಿ  ಆನಂದ ತಾಂಡವ ನೃತ್ಯ ಮಾಡಿದನು. ಇದನ್ನು ವೀಕ್ಷಿಸಿದ ವಿಷ್ಣು ಗೋವಿಂದರಾಜನಾಗಿ ಇಲ್ಲಿ ನೆಲೆಸಿದನಂತೆ. ಈ  ಸಂದರ್ಭದ ನೆನೆಪಿಗಾಗಿ ಇಲ್ಲಿ ಎಲ್ಲ ಶಿವಾಲಯದಂತೆ ಶಿವ ಲಿಂಗದ ಬದಲು ನಟರಾಜನ ಬೆಳ್ಳಿಯ ಪ್ರತಿಮೆಯೇ ಮೂಲ ವಿಗ್ರಹವಾಯಿತು. ಚೋಳರಾಜರು ನಟರಾಜನನ್ನು ಪ್ರತಿಮಾ ರೂಪದಲ್ಲಿಯೇ   ಪೂಜಿಸಿದರು. ಇಲ್ಲಿ ಇರುವ ಶಿವನ ರೂಪ ಆಕಾಶ ಲಿಂಗ ಅಥವಾ ಕನಕಸಭೈನಾಥರ್ ಆಲಯವಾಗಿದೆ.

ಇಲ್ಲಿನ ಗರ್ಭ ಗುಡಿಯಲ್ಲಿ ಇರುವುದು ಗೋಡೆಯ ಮೇಲಿನ ಬೆಳ್ಳಿಯ ನಟರಾಜನೇ ಹೊರತು ಶಿವಲಿಂಗವಲ್ಲ. ಈ ವಿಗ್ರಹಕ್ಕೆ ಇಲ್ಲಿನ ವಂಶಾನುಗತ ಅರ್ಚಕರಾದ ದೀಕ್ಷಿತರ್ ವಂಶೀಕರು ಶಿವಾಗಮದ ಪ್ರಕಾರ   ಪೂಜೆ ಸಲ್ಲಿಸುತ್ತಾರೆ. ನಂತರ ಇಲ್ಲಿ ಸ್ಫಟಿಕ ಶಿವಲಿಂಗ ಪ್ರತಿಷ್ಟೆಯಾಗಿ ದಿನಕ್ಕೆ 6 ಬಾರಿ ಪೂಜೆಯಾಗುತ್ತದೆ ಎನ್ನುವುದು ವಿಶೇಷ. ಇಲ್ಲಿ ನಟರಾಜ ಶಿವ ಮತ್ತು ಶಿವಕಾಮಿ ಅಲ್ಲದೆ ಸೂರ್ಯ, ಗಣೇಶ, ಮುರುಗ ಸುಬ್ರಹ್ಮಣ್ಯ, ವೈಷ್ಣವ ಸಂಪ್ರದಾಯದ ಗೋವಿಂದರಾಜ, ಪಂಕಜವಲ್ಲಿ ತಾಯಾರ್, ಗರುಡ ಹನುಮಾನರ ಆಲಯಗಳೂ ನಂತರ ಸೇರ್ಪಡೆಯಾದದ್ದು ವೈಷ್ನವ ಒಲವಿದ್ದ ಪಾಂಡ್ಯ ದೊರೆಗಳು, ವಿಜಯನಗರದ ಅರಸರ ಆಳ್ವಿಕೆ ಇಲ್ಲಿ ಇದ್ದಾಗ.

ಚಿದಂಬರಂ ದೇವಾಲಯ ಇತರೆ ಶಿವಾಲಯಗಳಿಗಿಂತ ಭಿನ್ನವಾಗಿದೆ. ಇಲ್ಲಿನ 4 ಪ್ರಾಕಾರಗಳಲ್ಲಿ ಹಲವು ರಂಗ ಮಂಟಪಗಳಿವೆ. ಪೊನ್ನಂಬಲ- ಚಿನ್ನದ ದೇಗುಲದ ಮಂಟಪ, ಭರತ ಮುನಿಯ ನಾಟ್ಯ ಶಾಸ್ತ್ರದ 108 ಭಂಗಿಗಳನ್ನು ಒಳಗೊಂಡ ಮಂಟಪಗಳು,  ನಯನ್ಮಾರರ ಮಂಟಪವು ದುರಸ್ತಿಗೊಳ್ಳುತ್ತಿದೆ. ಪ್ರತಿ ಗೋಡೆ, ಕಂಬ, ಗೋಪುರಗಳ ಮೇಲೂ ಕಲೆಯ ಹಲವು ಪ್ರಕಾರದ ವಿಗ್ರಹಗಳ ಸೂಕ್ಷ್ಮ ಕುಸುರಿ ಕೆತ್ತನೆ ಇಲ್ಲಿ ನೃತ್ಯಾಸಕ್ತರ ಮನತಣಿಸುತ್ತದೆ. ನಟರಾಜ ದೇವಾಲಯ ಪ್ರಾಕಾರಗಳಲ್ಲಿ ಹಲವು ತೀರ್ಥ ಕೊಳಗಳಿವೆ. ಇದರಲ್ಲಿ ಶಿವಗಂಗಾ ತೀರ್ಥ ಪರಮ ಪವಿತ್ರವೆಂದು ಭಕ್ತರು ಭಾವಿಸುತ್ತಾರೆ.

ಇಲ್ಲಿ ನಮ್ಮ ರಾಜ್ಯದ ನಂಜನಗೂಡಿನಂತೆ ಪಂಚರಥಗಳನ್ನು ಶಿವರಾತ್ರಿ ಮತ್ತು ಆರ್ದ್ರಾ ನಕ್ಷತ್ರದ ಉತ್ತರ ದರ್ಶನದ ವೇಳೆ ಎಳೆಯುತ್ತಾರೆ. ಈ ದೇವಾಲಯದ ಮತ್ತೊಂದು ವಿಶೇಷ ಎಂದರೆ, ಶಿವಶರಣರಾದ 63 ಮಂದಿ ನಯನ್ಮಾರರಿಗೆ ಪ್ರತ್ಯೇಕ ಮಂದಿರವಿದ್ದು, ಅಪ್ಪರ್, ಮಣಿಕಾವಾಚಕರ್ ಮತ್ತಿತರ ಸಂತರಿಗೆ ಪೂಜೆ ಸಲ್ಲುತ್ತದೆ. ನಯನ್ಮಾರರ ದಿವ್ಯ ಪ್ರಬಂಧವೆನಿಸಿದ ಪೆರಿಯ ಪುರಾಣದ ತಿರುಮೊರೈ ಅಥವಾ  ತೇವರಂಗಳನ್ನು ಭಕ್ತರು ತನ್ಮಯರಾಗಿ ಹಾಡುತ್ತಾರೆ. ಇಲ್ಲಿ ಸಂಸ್ಕೃತ ವೈದಿಕ ಮಂತ್ರಗಳ ಬಳಕೆ ಸೀಮಿತವಾಗಿರುತ್ತದೆ.

ಈ ದೇವಾಲಯದ ಬಗ್ಗೆ ಉಲ್ಲೇಖವಿರುವ ಮೊದಲ ಶಾಸನವು 10ನೆ ಶತಮಾನದ ಮೊದಲನೆ ಆದಿತ್ಯ ಚೋಳ, ಪರಾಂತಕ ಚೋಳರ  ಕ್ರಿ.ಶ 950ರ ತಾಮ್ರ ಶಾಸನಗಳು ದೊರೆತಿವೆ. ಈ ಆಲಯವು ಮುಸ್ಲಿಮರ ಆಕ್ರಮಣಕ್ಕೆ ಸಿಕ್ಕಿ ಅಮೂಲ್ಯ ಆಭರಣಗಳು ರಾಜರ ಕೊಡುಗೆಗಳು ನಾಪತ್ತೆಯಾಗಿವೆ. ಆಂಕೊರ್ ವಾಟಿನ  ದೊರೆ ಇಲ್ಲಿಗೆ ಅಮೂಲ್ಯ ವಜ್ರಾಭರಣ ಕೊಡುಗೆಯಾಗಿತ್ತಿದ್ದಾನೆ.

ಕಲಾ ಪೋಷಕರಾಗಿದ್ದ ಚೋಳರು, ಪಾಂಡ್ಯರು, ನಂತರ ಆಳಿದ ವಿಜಯನಗರದ  ಶ್ರೀ ಕೃಷ್ಣದೇವರಾಯ-ಅಚ್ಯುತರಾಯರ ಕಾಲದಲ್ಲಿ ಹಲವು ಬಾರಿ ದುರಸ್ತಿ, ಅಭಿವೃದ್ಧಿ, ಸೇರ್ಪಡೆ ಕೆಲಸಗಳು ಈ ದೇವಾಲಯಕ್ಕೆ ನಡೆದಿವೆ. ಆಗಿನ ತಿಲ್ಲೈ ಕಾಡು ಬಳ್ಳಿಗಳ ಪ್ರದೇಶ ಈಗ 40 ಎಕರೆ ವಿಸ್ತೀರ್ಣದ ದೇವಾಲಯವಾಗಿ ರೂಪುಗೊಂಡಿದೆ. ಈ ದೇವಾಲಯ ಆಡಳಿತವು ಪರಂಪರೆಯಿಂದ ದೀಕ್ಷಿತರ್ ವಂಶಕ್ಕೆ ಸೇರಿದೆ. ಪೂಜಾ ವಿಧಾನವೂ ಸ್ವಲ್ಪ ಭಿನ್ನವಾಗಿರುತ್ತದೆ. ಎಲ್ಲಾ ಉತ್ಸವ ಸಂದರ್ಭಗಳಲ್ಲೂ ಮೂಲ ವಿಗ್ರಹವಾದ ಬೆಳ್ಳಿಯ ನಟರಾಜನನ್ನೇ ಮೆರವಣಿಗೆ ಮಾಡುತ್ತಾರೆ.

 


 

 


 


 



No comments: